08354-235070 kar.bayalataacademy.bagalkot@gmail.com
ಬಾಗಲಕೋಟಕರ್ನಾಟಕ

ಯೋಜನೆಗಳು

ವಿಕೇಂದ್ರೀಕರಣದ ಆಶಯ

 ವಿಕೇಂದ್ರೀಕರಣದ ಆಶಯದ ಹಿನ್ನಲೆಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ಬಾಗಲಕೋಟದಲ್ಲಿ ರಚನೆಯಾಗಿದೆ . ಮೂರು ವರ್ಷಗಳ  ಹಿಂದೆ ಕರ್ನಾಟಕ ಘನ ಸರಕಾರವು  ಪ್ರೊ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ನೀತಿ ರಚನಾ ಸಮೀತಿಯನ್ನು ನಿಯಮಿಸಿತು. ಅದರಲ್ಲಿ ಡಾ. ಗುರುಲಿಂಗ ಕಾಪಸೆ, ನಾಡೋಜ ಗೀತಾ ನಾಗಭೂಷಣ, ಬಸವಲಿಂಗಯ್ಯ ಮುಂತಾದ ಗಣ್ಯರು ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಮತ್ತು ಬಯಲಾಟ ಅಕ್ಯಾಡೆಮಿಯಿಂದ ಪ್ರತ್ಯೇಕಗೊಂಡು ಕರ್ನಾಟಕ ಬಯಲಾಟ ಅಕಾಡೆಮಿ ರಚನೆಯಾಗಬೇಕೆಂದು ವಿಕೇಂದ್ರೀಕರಣದ ಹಿನ್ನಲೆಯಲ್ಲಿ ಅದರ ಕೇಂದ್ರ ಕಚೇರಿಯು ಬಾಗಲಕೋಟೆಯಲ್ಲಿ ಸ್ಥಾಪನೆಗೊಳ್ಳಬೇಕೆಂದೂ ಸಮೀತಿಯು ಶಿಫಾರಸ್ಸು ಮಾಡಿತು. ಇದರನ್ವಯ ೧೯-೦೩-೨೦೧೮ ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಧಿಸೂಚನೆ ಹೊರಡಿಸಿ ಕರ್ನಾಟಕ ಬಯಲಾಟ ಅಕ್ಯಾಡೆಮಿಯು ಅಧ್ಯಕ್ಷರನ್ನೂ ೧೨ ಜನ ಸದಸ್ಯರನ್ನು ಘೋಷಿಸಿತು . ಪ್ರಸ್ತುತ ಅಧ್ಯಕ್ಷರ ಸದಸ್ಯರ ಅವಧಿ ೩ ವರ್ಷ.

ಕಲಾವಿದರೇ ಬಯಲಾಟಗಳ ಶಕ್ತಿ

ಕರಾವಳಿಯ ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳ ವ್ಯಾಪ್ತಿಯನ್ನು ಕರ್ನಾಟಕ ಬಯಲಾಟ ಅಕಾಡೆಮಿಯು ಹೊಂದಿದೆ .

ದೊಡ್ಡಾಟ , ಸಣ್ಣಾಟ , ಶ್ರೀಕೃಷ್ಣ ಪಾರಿಜಾತ , ತೊಗಲುಗೊಂಬೆಯಾಟ , ಸೂತ್ರಗೊಂಬೆಯಾಟ – ಇವೆಲ್ಲ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಹರಡಿಕೊಂಡಿವೆ . ಕಲಾವಿದರೇ ಈ ಬಯಲಾಟಗಳ ಶಕ್ತಿ ಮತ್ತು ಜೀವಾಳ . ತಮ್ಮ ಕಷ್ಟದ ಬದುಕಿನಲ್ಲಿಯೂ ಬಯಲಾಟಗಳನ್ನು ಕಲಾವಿದರು ಉಳಿಸಿಕೊಂಡು ಬಂದಿದ್ದಾರೆ.

ಬಯಲಾಟಗಳ ಗುಣಮಟ್ಟ ಸುಧಾರಣೆ

ಆಧುನಿಕ ಸಿನಿಮಾ , ಟಿ ವ್ಹಿ ಗಳಂತಹ ಮನರಂಜನಾ ಮಾಧ್ಯಮಗಳಿಗಿಂತಲೂ ಬಯಲಾಟಗಳು ಜೀವಂತ ಕಾಲ ಮಾಧ್ಯಮಗಳೆನಿಸಿವೆ . ಈಗ ಮಸುಳಿಸುತ್ತಿರುವ ಇವುಗಳ ಗುಣಮಟ್ಟವನ್ನು ಯತ್ತರಿಸುವ ಅವುಗಳನ್ನು ಜನಪ್ರಿಯಗೊಳಿಸುವ ತನ್ಮೂಲಕ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉದಾತ್ತ ಧೇಯಗಳನ್ನು ಬಯಲಾಟ ಅಕಾಡೆಮಿಯು ಹೊಂದಿದೆ.

ಸಲಹೆಗಳ ಕ್ರೋಢೀಕರಣ :

ಬಯಲಾಟಗಳ ಗುಣಮಟ್ಟ ವಿಸ್ತರಣೆ ಕೇವಲ ಅಧ್ಯಕ್ಷರಿಂದ ಸಾಧ್ಯವಾಗುವದಿಲ್ಲ . ಅದಕ್ಕಾಗಿ ಜನಪದ ಕಲಾವಿದರ , ವಿದ್ವಾಂಸರ ಸಲಹೆಗಳನ್ನು ಕ್ರೋಢೀಕರಿಸಿ ಯೋಜನೆಗಳನ್ನು ರೂಪಿಸಲಾಗುವುದು . ಅದಕ್ಕಾಗಿ ಸ್ಥಾಯಿ ಸಮೀತಿಯೊಂದಿರುತ್ತದೆ.

ಸಂವಾದಗಳು

ಮೊದಲ ಹಂತದಲ್ಲಿ ಬಯಲಾಟ ಸ್ಥಿತಿ ಗತಿ ಅರಿಯಲು ಮತ್ತು ಅವುಗಳನ್ನು ಸುಧಾರಿಸಲು ತೆಗೆದುಕೊಳ್ಳುವ ಕ್ರಮಗಳಿಗಾಗಿ ಕಲಾವಿದರೊಂದಿಗೆ ಸಂವಾದ ಗೋಷ್ಠಿಗಳನ್ನು ಏರ್ಪಡಿಸಲಾಗುವದು . ಈ ಸಂವಾದ ಗೋಷ್ಠಿಗಳು ಆಯಾ ಪ್ರಕಾರಗಳ ದಟ್ಟತೆ ಇರುವಲ್ಲಿ ಪ್ರದೇಶವಾರು ನಡೆಯುತ್ತದೆ.

ಕಲಿಕಾ ಶಿಬಿರಗಳು : ಕರ್ನಾಟಕ ಬಯಲಾಟಗಳ ಪರಂಪರೆ ಅನೂಚಾನಾಗಿ ಮುಂದುವರೆಯುವಂತೆ ಅಲ್ಲಲ್ಲಿ ಬಯಲಾಟ ಕಲಿಕಾ ಶಿಬಿರಗಳನ್ನು ಸಂಯೋಜಿಸಲಾಗುವುದು. ಇವು ಹಿರಿಯ ಕಲಾವಿದರ ಮತ್ತು ವಿದ್ವಾಂಸರ ಮಾರ್ಗದರ್ಶನದಲ್ಲಿ ನಡೆಯುತ್ತದೆ.